Tuesday, August 20, 2013

ನಾನಲ್ಲಿ... ಅವಳಲ್ಲಿ.... ಇಬ್ಬರೂ ಒಂಟಿ

 ನಾನಲ್ಲಿ... ಅವಳಲ್ಲಿ.... ಇಬ್ಬರೂ ಒಂಟಿ

- ಮಾಲತೇಶ್ ಅರಸ್

 ಮನಸಿಗೆ ಸಂಭ್ರಮವಾದಾಗ ಅಥವಾ ಮನಸ್ಸಿಗೆ ತೀವ್ರವಾಗಿ ನೋವಾದಾಗಲೆಲ್ಲಾ ನಾನು ಒಂಟಿಯಾಗುತ್ತೇನೆ. ಮನದಲ್ಲಿರುವುದನ್ನು ಮೆಲ್ಲಗೆ ಅಕ್ಷರ ರೂಪಕ್ಕಿಳಿಸಿ ನೆಮ್ಮದಿಯ ನಿಟ್ಟುಸಿರು ಬಿಡುತ್ತೇನೆ. ಅದೆಷ್ಟೇ ಬರೆದರೂ ಮತ್ತೆ ನೆಮ್ಮದಿ ಕೆಡುತ್ತಲೇ ಹೋಗುತ್ತದೆ. ಅಂತಹ ಘಟನೆ ನಡೆದಾಗಲೂ ನಾನು ಒಂಟಿಯಾಗಿ ಕುಳಿತು ನಾನು ನನ್ನೊಡನೆಯೇ ಮಾತನಾಡಿಕೊಂಡು, ಬೈದಾಡಿಕೊಂಡು ಸುಮ್ಮನಾಗುತ್ತೇನೆ. ಆದರೆ ನಾನು ಒಂಟಿಯಾಗುವುದು ಹೊಸತಲ್ಲ. ನನಗೆ ತಿಳಿಯದಾಗಿಯೇ ಹಳೆಯದಾಗಿದೆ. ಮನೆಯವರ ಪ್ರೀತಿ ಅತಿಯಾಗಿ ಮತ್ತೆ ಶೂನ್ಯಸ್ಥಿತಿಗೆ ಬರುವುದು ಮಾಮೂಲಾಗಿದೆ.
 ಕಷ್ಟ ಪಟ್ಟು ಓದಬೇಡ, ಇಷ್ಟ ಪಟ್ಟು ಓದು. ರ‌್ಯಾಂಕ್ ಬರ್ತಿಯಾ ಎಂದು ಹೇಳಿದ್ದ ರಾಮಗಿರಿಯ ಕರಿಸಿದ್ದೇಶ್ವರ ಪ್ರೌಢಶಾಲೆಯ ಕನ್ನಡದ ಮೇಷ್ಟು ಸಿಕೆ ಇಂದಿಗೂ ನನ್ನ ಜತೆಯಲ್ಲಿಯೇ ಇದ್ದಾರೆ. ಅದೇ ರೀತಿ. ಕಷ್ಟ ಪಟ್ಟು ಒತ್ತಡಕ್ಕೆ ಸಿಲುಕಿ ಮದುವೆಯಾಗಬೇಡ, ಇಷ್ಟ ಪಟ್ಟು ಪ್ರೀತಿಯಿಂದ ಮದುವೆಯಾಗು ಎಂದು ಹೇಳಿದ್ದ ಗೆಳೆಯ ಚಿದಂಬರ ಮೂರ್ತಿಯೂ ಜತೆಯಲ್ಲಿದ್ದಾನೆ.
  ಅವರ ಮಾತಿನಂತೆ ಇಷ್ಟ ಪಟ್ಟು ಓದಿ ಎಂ.ಎ ಪತ್ರಿಕೋದ್ಯಮ, ಬಿ.ಎಡ್, ಪಿಜಿ ಡಿಪ್ಲೋಮೋ ಪತ್ರಿಕೋದ್ಯಮ, ಎಲ್.ಎಲ್.ಬಿ ಮುಗಿಸಿ ಇದೀಗ ಮತ್ತೆ ಎಂ.ಎ ರಾಜ್ಯಶಾಸ್ತ್ರವನ್ನೂ ಓದುತ್ತಲೇ ಇದ್ದೇನೆ. ಗೆಳೆಯನ  ಮಾತಿನಂತೆ ಇಷ್ಟ ಪಟ್ಟು ಮದುವೆಯಾಗಿ ಸಂಸಾರ ಸಾಗಿಸುತ್ತಲೂ ಇದ್ದೇನೆ. ಪ್ರೀತಿ ಇದೆ. ಅಕ್ಕರೆ ಇದೆ. ಚೆಲುವಿದೆ. ನಗುವಿದೆ. ಎಲ್ಲದರ ಜತೆಗೆ  ಅಪ್ಪ - ಅಮ್ಮನ ಕಿರಿಕ್ಕೂ ಇದೆ.
 ನೆಮ್ಮದಿ ಎಂಬ ಬಲೂನಿಗೆ ಪಿನ್ನು ಹೊಡೆದಾಗ:
 ನಾನು. ಇಷ್ಟ ಪಟ್ಟದ್ದನ್ನು ಪಡದೇ ತೀರಬೇಕೆಂಬ ಹುಂಬ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂಬ ಛಲಗಾರ. ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕೆನ್ನುವ ಯುವಕ. ಹೀಗಿರುವಾಗ ದೂರದೂರಿನ ಮಲೆನಾಡ ಯುವತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೇ ಪರದಾಡಿದ ಕ್ಷಣಗಳು ಸಾವಿರಾರು. ಆಡಂಬರವೆಂಬುದಕ್ಕೆ ಬರೆ ಎಳೆದು ಸಾಲಗಾರನಾಗದೇ ಚಿತ್ರದುರ್ಗದ ಮುರುಘಾ ಮಠದಲ್ಲಿ ಸರಳ ಮದುವೆಯಾಗುವ ಮೂಲಕ  ಹಲವರ ಬಳಿ ಸೈ ಎನಿಸಿಕೊಂಡೆ. ಆದರೆ ಮನೆಯವರಿಂದ ಸೈ ಎನಿಸಿಕೊಳ್ಳಲಾಗಲಿಲ್ಲ.
 ನನ್ನನ್ನು ವರದಕ್ಷಿಣೆಯ ಮೂಲಕ ದುಡ್ಡು ಮಾಡಿಕೊಡುವ ಮಗನೆಂದು ಭಾವಿಸಿದ್ದು ಅವರಿಗೆ ಕನಸಾಯ್ತು. ಕೊನೆಗೆ ಮದುವೆಯಾಗಿ 24 ಗಂಟೆಗಳಲ್ಲಿಯೇ ಅರಸು ಮನೆತನದ ಸದಸ್ಯಳಾದ  ನನ್ನ ಶ್ರೀಮತಿ ಶೃತಿಯನ್ನು ಆರತಿ ಎತ್ತಿ  ಮನೆಗೆ ಬರಮಾಡಿಕೊಂಡರು ನನ್ನ ಪೋಷಕರು.  ನನ್ನ ಅತ್ತಿಗೆ ತಾಯಿಯಾದಾಗ ಕೊಂಚ ಸಹಾಯ  ಹಸ್ತ ಚಾಚಿದೆ. ಮತ್ತು ಸಣ್ಣ ಅಕ್ಕ ತಾಯಿಯಾದಾಗ ನಾನೇ ನಿಂತು ಎಲ್ಲವನ್ನು ನಿಭಾಯಿಸಿದೆ. ನನ್ನ ಮತ್ತು ನನ್ನ ಶ್ರೀಮತಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ನನ್ನ ಪೋಷಕರು ಸದ್ದಿಲ್ಲದಂತೆ ದೂರಾದರು.
 ಪ್ರೀತಿಯ ಮಡದಿಯ ಮಡಿಲು ತುಂಬುವ ಕಂದ ಗರ್ಭದಲ್ಲಿ ಕೂತು 4 ತಿಂಗಳು ಕಳೆದರೂ ಸಹಾಯಕ್ಕೆ ಯಾರೂ ಬರಲಿಲ್ಲ. ನೆಮ್ಮದಿಯಾಗಿದ್ದ ನನಗೆ ಹೆತ್ತವರು ಸುಮ್ಮನೇ ಕಿರಿಕ್ಕು ಶುರು ಮಾಡಿದರು.  ಜಾತಿಯ ಮೀರಿ, ವರದಕ್ಷಿಣೆ ಇಲ್ಲದೆ  ಪ್ರೀತಿಸಿ ವಿವಾಹವಾಗಿದ್ದು  ಅವರಿಗೆ ಇಷ್ಟವಿರಲಿಲ್ಲ ಎಂದು ತಿಳಿಯಿತು. ಐದು ತಿಂಗಳಾದ ಕೂಡಲೇ ನಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದೆ. ಜೊತೆಯಲ್ಲಿದ್ದ ನಾವು ಇದೀಗ ಇಬ್ಬರೂ ಒಂಟಿಯಾದೆವು. ಅಲ್ಲಿ ಅವಳು ಒಂಟಿ. ಇಲ್ಲಿ ನಾನೂ ಒಂಟಿ.
 ಮಾತಲ್ಲೆ ಮನೆ ಕಟ್ಟುವ ಅಪ್ಪ- ಅಮ್ಮ:
  ಎಲ್ಲರೂ ಮನೆಯನ್ನು ಇಟ್ಟಿಗೆ, ಮಣ್ಣು ಸಿಮೆಂಟಿನಿಂದ ಕಟ್ಟುತ್ತಾರೆ ಆದರೆ ನನ್ನ ಪೋಷಕರು ಮಾತಲ್ಲೆ ಮನೆ ಕಟ್ಟಿ ಮುಗಿಸುವ ಛಾತಿಯವರು.  ಕಷ್ಟ ಎಂದಾಗ ಮೆಲ್ಲನೆ ದೂರ ಸರಿಯುವ ಮತ್ತು ಬೇಕಾದಾಗ ಹತ್ತಿರ ಬಂದು ತಮ್ಮೆಲ್ಲಾ ಕಾಯಕಗಳನ್ನ ಪೂರೈಸಿಕೊಳ್ಳುವ ನಿಪುಣರು ಮತ್ತು ಅತ್ಯಂತ ಚಾಣಾಕ್ಷರು. ಬಲಗೈ ಬಂಟನಾಗಿ ನನ್ನ ಅಣ್ಣ, ಎಡಗೈ ಬಂಟನಾಗಿ ನನ್ನ ತಮ್ಮ  ಅವರಿಗೆ ಸಾಥ್ ನೀಡಲಾರಂಭಿಸಿದರು. ನಾನು ಕೋಟೆಗಳ ನಾಡ ಬಿಟ್ಟು ರಾಜಧಾನಿಗೆ ಬಂದಾಗ ನನ್ನಾಕೆ ಐದು ತಿಂಗಳ ಗರ್ಭಿಣಿ, ಸಹಜವಾಗಿಯೇ ಆಗ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಊಟ ಸೇರುವುದಿಲ್ಲ, ಊಟ ಮಾಡಿದರೂ ಕ್ಷಣಾರ್ಧದಲ್ಲಿ ವಾಂತಿಯ ಪ್ರಕ್ರಿಯೆ ಶುರು. ಹೀಗೆ ಎಲ್ಲವನ್ನು ಆಕೆ  ಅನುಭವಿಸಿದರೂ ಆ ಬಗ್ಗೆ ನಾನು ಮನೆಯವರಿಗೆ ಮಾಹಿತಿ ನೀಡಿದರು ಅವರು ಸುತಾರಾಂ ಕಿವಿಗೊಡಲಿಲ್ಲ.
 ಪೋನಲ್ಲೇ ಎಲ್ಲವನ್ನೂ ಸುಮ್ಮನೆ ವಿಚಾರಿಸಿ ಬಿಟ್ಟ ಅದ್ಬುತ ಜೀವಿಗಳು ಅವರು. ನನ್ನಕ್ಕ, ಅತ್ತಿಗೆ, ಸಣ್ಣಕ್ಕ ತಾಯಿಯಾಗುವ ವೇಳೆ ಎಲ್ಲವನ್ನೂ ನೀಡಿದ ಇದೇ ನನ್ನ ಪಾಲಕರು, ನನ್ನ ಶ್ರೀಮತಿಗೆ ಕೈ ಜೋಡಿಸಲಿಲ್ಲ. ಇವೆಲ್ಲಾ ನಾನು ಅಲ್ಲೆ ಇದ್ದಾಗ ನಡೆದ ಘಟನೆಗಳು.
ರಾಜಧಾನಿಯಲ್ಲಿ ನಾನು:
 ನಾನು ರಾಜಧಾನಿಗೆ ಬಂದು ಇಲ್ಲಿನ ನೆಲಕ್ಕೆ ಬಿದ್ದಾಗ ನನ್ನನ್ನು ಅನೇಕರು ಬಾ ಎಂದು ಕರೆದರು. ಸ್ವಾಭಿಮಾನದ ದೀವಿಗೆಯಲ್ಲಿ ಕುಳಿತ ನಾನು ಎಲ್ಲೂ ಹೋಗಲಿಲ್ಲ.  ಆ ಕ್ಷಣದಲ್ಲಿ ನನ್ನ ಮಿತ್ರ ನಿಂಬೆಮರದಹಳ್ಳಿ ರಮೇಶ್ ‘‘ಗೆಳೆಯ.. ಬಾ ನನ್ನೊಟ್ಟಿಗೆ ನನ್ನ ರೂಮಿನಲ್ಲಿಯೇ ಇರು’’ ಎಂದು ಕರೆದು ಆಶ್ರಯ ನೀಡಿದ.  ಆಗಸ್ಟ್ ತಿಂಗಳಿಂದ ಶುರುವಾದ ನನ್ನ ಹೋಟೆಲ್ ಊಟದ ಪಯಣ ಸತತ ಹತ್ತು ತಿಂಗಳು ತುಂಬಿತು.
  ಇತ್ತ ನಾನು ಒಂಟಿಯಾಗಿ ಅತ್ತ ಆಕೆಯೂ ಒಂಟಿಯಾಗಿ ಬದುಕುವುದನ್ನು ಕಲಿಯ ಬೇಕಾಯ್ತು. ಆಗ ನನ್ನ ಶ್ರೀಮತಿಗೆ ಆಸರೆಯಾದವರು ನಮ್ಮ ಮನೆಯ ಒಡನಾಡಿಗಳಾದ  ಶ್ರೀಮತಿ ರೇಖಾ ಅಕ್ಕ ಮತ್ತು ಡಾ.ಬಸವರಾಜ್. ಮತ್ತು ಮನೆ ಮಾಲೀಕರಾದ ವೀಣಾ ಎಂ. ಸ್ವಾಮಿ ದಂಪತಿಗಳು. ನಾನು ಸದಾ ಕಾಲ ಅವರನ್ನು ನೆನೆಯುತ್ತೇನೆ.   ಹಸಿದ ಹೊಟ್ಟೆಗೆ ಭೋದನೆ ಬೇಕಿಲ್ಲ, ಪಾಠ ಬೇಕಿಲ್ಲ, ಅನ್ನ ಬೇಕು. ಆಸರೆಗೆ ಸಹಾಯ ಹಸ್ತ ಬೇಕು ಅವೆರಡನ್ನು ನೀಡಿದ್ದು ಇವರೇ.. ಹಾಗಾಗಿ ನಾನು ಅವರಿಗೆ ಋಣಿ.
  ಇದನ್ನು ಮೊದಲೇ ಹೇಳಿದ್ದು ಏಕೆಂದರೇ  ಕಷ್ಟಗಳನ್ನು ಹೇಳಿದರೇ ಸಾಲದು ಸಹಾಯ ಹಸ್ತ ಮಾಡಿದವರ ನೆನೆಯ ಬೇಕು ಅಂತ.
 ಆಗಸ್ಟ್ 2012 ರಿಂದ  ನನ್ನ ಬದುಕು ರಾಜಧಾನಿಯಲ್ಲಿ, ಅವಳ ಬದುಕು ಚಿತ್ರದುರ್ಗದಲ್ಲಿ ಸಾಗಿತು. ಪಾಪ ಕಂದನ ಹೊತ್ತು  ಆಕೆ ಅನುಭವಿಸಿದ ಕಷ್ಟ ಯಾವ ಶತ್ರುವಿಗೂ ಬೇಡ. ಊಟ, ತಿಂಡಿ,  ತಾನೇ ಮಾಡಿಕೊಳ್ಳುವುದು ಸೇವಿಸುವುದು ಯಾವೊಬ್ಬ ಗರ್ಭಿಣಿ ಯರಿಗೂ ಸಾಧ್ಯವಿಲ್ಲ.
 ಹೀಗೆ ನಡೆಯುತ್ತಲೇ ಇತ್ತು. ನಾನೂ ಕೂಡ ವಾರದ ರಜೆ ಬಂದ ಕೂಡಲೇ ರಾತ್ರಿ ಬಸ್ ಹತ್ತಿ ಚಿತ್ರದುರ್ಗಕ್ಕೆ ತೆರಳುತ್ತಿದ್ದೆ. ಅಲ್ಲಿ ನನ್ನಾಕೆಯ ಜೊತೆಗಿದ್ದು ಸಾಂತ್ವನ ಹೇಳಿ, ಸಂಭ್ರಮ ಮಾತುಗಳನ್ನಾಡಿ. ಕೆಲ ಹೊತ್ತು ಸುತ್ತಾಡಿ ಕೋಟೆಯ ಸೌಂದರ್ಯವ ಸವಿದು ಮತ್ತೆ ಮರುದಿನ ಮರಳುತ್ತಿದ್ದೆ.
 ಕೈ ಕೊಟ್ಟ ಅಕ್ಕ :
  ನನ್ನ ಸಣ್ಣ ಅಕ್ಕ ಚಂದ್ರಕಲಾ  ಪಿತೃವಾಕ್ಯ ಪರಿಪಾಲಳು. ಆಕೆಯ ಸಂಸಾರ ಕೊಂಚ ಯಡವಟ್ಟಾಗಿ ತವರು ಮನೆಗೆ ಬಂದು ಕುಳಿತಿದ್ದಳು. ಅದನ್ನು ಸರಿಪಡಿಸಲೇ ಬೇಕೆಂಬ ಹಟವೂ ಮತ್ತು ಜವಾಬ್ದಾರಿಯೂ ನನ್ನಲ್ಲಿತ್ತು. ಏಕೆಂದರೇ ನಾನು ನನ್ನೂರು ಹರ್ತಿಕೋಟೆ. ಬಂಧುಗಳ ಊರು ಹಿರಿಯೂರು, ಕಳವಿಭಾಗಿ, ಸಂಗೇನಹಳ್ಳಿ, ಕಲ್ಲಟ್ಟಿ, ಭರಂಪುರ, ಶಿಡ್ಲಯ್ಯನಕೋಟೆ, ಗೊರ‌್ಲತ್ತು, ಚೌಳೂರು, ಚಿಲ್ಲಹಳ್ಳಿ, ಚಳ್ಳಕೆರೆ, ಮಸ್ಕಲ್, ಆಲೂರು ಹೀಗೆ ಎಲ್ಲೆಡೆ ತಿರುಗುವಾಗ ನಿನ್ನ ಅಕ್ಕನ ಸಮಸ್ಯೆ ಏನಾಯ್ತು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರಿಂದ ನಾನು  ಭಾವನ ಬಳಿ ಬೈಯಿಸಿಕೊಂಡರೂ, ಒದೆಸಿಕೊಂಡರೂ ಪರವಾಗಿಲ್ಲ ಬಗೆ ಹರಿಸೋಣ ಎಂದು ಶ್ರಮಿಸಿದೆ. ಇದೇ ವೇಳೆ ನನ್ನ ಹೆಂಡತಿ  ತುಂಬು ಗರ್ಬಿಣಿಯಾದ ಹಿನ್ನಲೆಯಲ್ಲಿ  ಅಕ್ಕನನ್ನು, ಕರೆದು ನನ್ನ ಮನೆಯಲ್ಲಿ ಹೆಂಡತಿಯ ಜೊತೆಯಲ್ಲಿರುವಂತೆ ಬೇಡಿದೆ. ಆದರೇ ಆಕೆ ಕಿವಿಗೊಡದೆ ಬೆಂಗಳೂರಿನಲ್ಲಿದ್ದ ನನ್ನ ತಮ್ಮನಿಗೆ  ಅಡುಗೆ ಮಾಡಿಕೊಡಲೆಂದು ಹೋಗಿದ್ದಳು. ಹೀಗೆ ನನ್ನ ಪೋಷಕರು ನನಗೆ ನೀಡಿದ ಒಳ ಕಿರುಕುಳ ಸಾಕಷ್ಟಿವೆ.
 ಎಸ್ ಎಸ್‌ವೈ ಕ್ಲಾಸ್;
  ನಿಜಕ್ಕೂ ಇದೊಂದು ಅದ್ಬುತವಾದ ಕ್ಷಣ. ಗರ್ಭಿಣಿಯಾದ ಮಹಿಳೆಯರು ಮಗು ಹುಟ್ಟುವ ಮುನ್ನವೇ  ಏನೇನೋ ಕನಸುಗಳನ್ನು ಹೊತ್ತು ಕನವರಿಸುತ್ತಿರುತ್ತಾರೆ. ಹೀಗಿರುವ ವೇಳೆ ನನ್ನಾಕೆಗೆ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಋಷಿ ಪ್ರಭಾಕರ ಗುರೂಜಿ ಅವರ ಸಿದ್ಧ ಸಮಾಧಿ ಯೋಗ ತರಗತಿಯ ಪರಿಚಯಿಸಿದೆ. ಚಿತ್ರದುರ್ಗದಲ್ಲೇ ಇರುವ ಚಂದ್ರಶೇಖರ ಮೇಟಿ ಗುರೂಜಿಗಳ ಮತ್ತು ಅವರ ಶ್ರೀಮತಿ ಬಳಿ ಗರ್ಭಾವತಿಯರಿಗೆ ಕೊಡುವ ವಿಶೇಷ ತರಗತಿಯನ್ನು ಶೃತಿ ಪಡೆದಳು. ಅವರ ಸಾಂತ್ವಾನ, ಮತ್ತು ಆತ್ಮಾಭಿಮಾನ ತುಂಬಿದ ಪ್ರೀತಿಯ ಮಾತುಗಳು ಆಕೆಗೆ ಹೆಚ್ಚು ಶಕ್ತಿ ತುಂಬಿದವು.
 ನಾವಿದ್ದೇವೆ ಚಿಂತಿಸ ಬೇಡ:
 ಹೀಗೆ 2012ರ ನವೆಂಬರ್ ತಿಂಗಳ ತನಕ ನಾನು ಪ್ರತಿ ಶನಿವಾರ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ  ಹೋಗಿ ಬರುವುದು ನಡೆದೇ ಸಾಗಿತ್ತು. ನನ್ನಾಕೆಯನ್ನು  ನೋಡಿಕೊಳ್ಳುತ್ತಿದ್ದ ವೈದ್ಯರಾದ ಡಾ. ರವಿಕುಮಾರ್ ಅವರು ಕೂಡ ಉತ್ತಮ ಸಲಹೆ- ಸೂಚನೆಗಳನ್ನು ನೀಡುವುದಲ್ಲದೆ, ಅರಸು ಚಿಂತಿಸಬೇಡಿ ನಾವಿದ್ದೇವೆ ಎಂಬ ಮಾತುಗಳು ಆಕೆ ಮತ್ತಷ್ಟು ಬಲಗೊಳ್ಳುವಂತೆ ಮಾಡಿದ್ದವು. ನನ್ನ ಸಹೋದರ ಸಮಾನ ಮಿತ್ರರಾದ ಕುಮಾರಸ್ವಾಮಿ, ಮಂಜುನಾಥ ರೆಡ್ಡಿ, ಸಚಿನ್ ಶಿವಪೂರ ಅವರು ನನಗೆ ಧೈರ್ಯ ತುಂಬಿದರು.
  ಹೀಗಿರುವಾಗ ಕೊನೆಗೆ ನಾನು ಪೋಷಕರನ್ನು ಕೊನೆಗೆ ಕರೆದರೂ ನನಗೆ ಕಷ್ಟಗಳ ಅರಿವಾಗಬೇಕೆಂಬ ದೃಷ್ಟಿಯಿಂದಲೋ, ಪೋಷಕರ ಅಗತ್ಯ ಬೇಕೆನಿಸಬೇಕೆಂಬ ಹುಂಬತನದಿಂದಲೋ ಬರಲೇ ಇಲ್ಲ. ಬಂದರೂ ಒಂದೆರಡು ಗಂಟೆಗಳ ಕಾಲ ಇದ್ದು ಪುಕ್ಸಟ್ಟೆ ಮಾತನಾಡಿ ಮಾಯವಾಗುತ್ತಿದ್ದರು.
  ಮಹಾಲಕ್ಷ್ಮಿಅಕ್ಕ:
 ಇದನ್ನೆಲ್ಲಾ ಕಂಡ ಶೃತಿ ಪೋಷಕರು ಬರಲಾರಂಭಿಸಿದರು. ವಾರಗಟ್ಟಲೇ ಆಕೆಯ ಜೊತೆಗಿದ್ದರು. ನನ್ನ ಅಜ್ಜನ ಸಂಬಂಧಿ ದೊಡ್ಡಮ್ಮನ ಮಗಳು  ನನ್ನಕ್ಕ ಮಹಾಲಕ್ಷ್ಮಿ ನಂದೀಶ್ ಬಂದು ನನ್ನಾಕೆಯ ಜೊತೆಯಲ್ಲಿರುತ್ತಿದ್ದರು.ಹೀಗೆ ಸಾಗಿ ಕೊನೆಗೆ ನವೆಂಬರ್ 25 ಸಮೀಪಿಸಿತು. ಆಕೆಯನ್ನು ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ವೈದ್ಯರು ಚಿಂತಿಸಬೇಡ ದೇವರಿದ್ದಾನೆ ಏನೂ ಆಗದು. ಎಂದು ನುಡಿಯುತ್ತಲೇ ಕ್ಷಣದಲ್ಲಿ ಅಲ್ಲಿ ಮಹಾಲಕ್ಷ್ಮಿ ಅಕ್ಕ ಆಗಮಿಸಿದರು.   ಶೃತಿ ಅವರ ಅಮ್ಮ ಮತ್ತು ಚಿಕ್ಕಮ್ಮ ಕೂಡಾ ಆಗಮಿಸಿದರು. 2012 ನವೆಂಬರ್ 25 ರ ಭಾನುವಾರದ ತುಳಸಿ ಹಬ್ಬದಂದು ನನ್ನಾಕೆ ಗಂಡು ಮಗನಿಗೆ ಜನ್ಮ ನೀಡಿದಳು.
 ಬಾರದ ಪೋಷಕರು:
 ಗಂಡು ಮಗುವಾಗುತ್ತಿದ್ದಂತೆ ನಾನು ರಾಮಗಿರಿಗೆ ಪೋನಾಯಿಸಿದೆ. ಗಂಡು ಮಗುವಾಗಿದೆ ಬನ್ನಿ ಎಂದು. ಆಗ ಅಯ್ಯೋ ನಾವು ಚಂದ್ರಕಲಾಳ ಮಗನಿಗೆ ನಾಮಕರಣ ಮಾಡುತ್ತಿದ್ದೇವೆ. ಮುಗಿಸಿಕೊಂಡು ಸಂಜೆ ಬರ‌್ತೇವೆ ಎಂದು ಪೋನ್ ಕಟ್ ಮಾಡಿದರು. ನನಗೆ ಸ್ವಲ್ಪವೂ ಮಾಹಿತಿ ನೀಡದೇ  ನಾಮಕರಣ ಮಾಡುವಂತದ್ದು ಏನಿತ್ತು. ಹೋಗಲಿ ಭಂಡಾರದೊಡೆಯ  ಒಳ್ಳೆಯದು  ಮಾಡಲಿ ಎಂದು ಮೌನವಾದೆ. ಸಂಜೆ ಮೆಲ್ಲಗೆ ಎಲ್ಲರೂ ಬಂದಿಳಿದರು. ನೋಡಿದರು, ನಕ್ಕರು, ಮಗು ಸೂಪರ್ ಎಂದು  ಮಾತನಾಡಿ ಸಂಜೆ ಮತ್ತೆ ಊರಿಗೆ ತೆರಳಿದರು. ಎಲ್ಲರೂ ಬಂದರು ಆದರೆ ಅರಸು ಮನೆತನರ ಮೊದಲ ಗಂಡು ಮಗುವನ್ನು ನೋಡಲು ನನ್ನ ಅಪ್ಪ ಮಾತ್ರ ಬಂದಿರಲಿಲ್ಲ. ಏಕೆ ಬರಲಿಲ್ಲ ಅಂತ ಕೇಳಿದರೇ ಅದಕ್ಕೆ ಸೂಕ್ತ ಉತ್ತರವಿಲ್ಲ.  10 ದಿನ. 20ದಿನ. 30ದಿನ, ಒಂದು ತಿಂಗಳಾದರೂ ಮೊಮ್ಮಗನ ನೋಡಲು ಅಪ್ಪ ಬರಲೇ ಇಲ್ಲ. ಅಮ್ಮ ಇದ್ದರೂ ಇಲ್ಲದಂತೆ ಇದ್ದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ.
 ಹೀಗೆ ನನ್ನಾಕೆಯ ಜೊತೆಗೆ ಅವರ ಅಮ್ಮ ಚಿಕ್ಕಮ್ಮ ಇದ್ದು ಆಕೆಯನ್ನು ಪೋಷಿಸಿದರು. ಅವರು 1ತಿಂಗಳ ನಂತರ ಹೊರಟು. ಮೂರು ದಿನಕ್ಕೊಮ್ಮೆ ಒಬ್ಬರಂತೆ ಶಿಫ್ಟ್ ಬರುವುದಾಗಿ ತೆರಳಿದರು. ಆದರೇ ನಮ್ಮ ಮನೆಯವರು ಮಾತ್ರ ಸದ್ದಿಲ್ಲದೆ ಕೈ ಕೊಟ್ಟರು.
 ಚಿಕ್ಕಮ್ಮನ ಮಗಳು:
  ಹೀಗೆ ಶೃತಿ ಒಂಟಿಯಾಗಿರುವುದನ್ನು ಕಂಡು ನನಗೆ ಮನಸು ತಡೆಯಲಾಗಲಿಲ್ಲ. ಸಂಗೇನಹಳ್ಳಿಯಲ್ಲಿದ್ದ ನನ್ನ ಚಿಕ್ಕಮ್ಮ ಮಗಳಾದ ನನ್ನ ತಂಗಿಯನ್ನು ಕರೆ ತಂದೆ, ಆಕೆಯ  ಮದುವೆ ಮಾಡಿಸುವುದಾಗಿ, ಅಲ್ಲದೆ ಮದುವೆಯಲ್ಲಿ ಸಹಕಾರ ಮಾಡುವುದಾಗಿಯೂ ಭರವಸೆ ಕೊಟ್ಟು ಕರೆತಂದೆ. ಮತ್ತು ಮಗುವಿಗೆ ಸ್ನಾನ ಮಾಡಿಸಲು  ಆಯಾಳನ್ನೂ ನೆಮಿಸಿದೆ. ಅಜ್ಜಿ, ಅತ್ತೆ, ದೊಡ್ಡಮ್ಮ ಇದ್ದರೂ ಇಲ್ಲದಂತಾದ ನನ್ನ ಕಂದನಿಂಗೆ ಬ್ರಾಹ್ಮಣ ಅಜ್ಜಿಯ ಪ್ರೀತಿಯ ಮಡಿ ನೀಡು ಆಸರೆಯಾಯಿತು. ಹೀಗೆ ತಿಂಗಳುಗಳು ಕಳೆದಾಗ ತವರು ಮನೆಯವರು ಆಕೆಯನ್ನು ತವರೂರಿಗೆ ಕರೆದುಕೊಂಡು ಹೋಗಿ ನೋಡಿಕೊಂಡರು. ಒಂದು ತಿಂಗಳ ಕಾಲ ನೆರವಿಗೆ ಬಂದಿದ್ದ ಚಿಕ್ಕಮ್ಮನ ಮಗಳಾದ ನನ್ನ ತಂಗಿಯನ್ನು ನನ್ನೂರಿನ ಅತ್ತೆ ಮಗನ ಜೊತೆ ವಿವಾಹವೂ ಆಯಿತು. ಕೊಟ್ಟ ಮಾತಿನಂತೆ ಹುಟ್ಟು ತಾಳಿಯನ್ನು ನಾನೇ ಕೊಡಿಸಿದೆ. ಅವಳ ಋಣ ತೀರಿಸಿದೆ.
 ನಾನೂ ಮತ್ತು ನನ್ನ ಅಜ್ಜಿ ಜೊತೆಗಿನ ಉತ್ತಮ ಭಾಂಧವ್ಯವನ್ನು ಪೋಷಕರು ಕೆಡಿಸಿದರು. ಅಜ್ಜಿ ಚಿನ್ನದ ಸರವನ್ನು ತಮ್ಮ ಬಳಿ ಇಟ್ಟುಕೊಂಡು ನನಗೆ ಮಾನಸಿಕ ಹಿಂಸೆ ನೀಡುವುದು ತಪ್ಪಿಲ್ಲ. ಅಜ್ಜಿನ ಸರದ ಜೊತೆಗೆ ನನ್ನ ಚಿನ್ನಾಭರಣಗಳನ್ನು ಅವರು  ಮೋಸದ ಮೂಲದ ಪಡೆದಿದ್ದು ಮಾತ್ರ ಇನ್ನೂ ಬೇಸರಿಕೆ  ಮತ್ತು ಆಕ್ರೋಶ ತಂದಿದೆ.
ರಾಜಧಾನಿಯತ್ತ ಪಯಣ:
  ಕೊನೆಗೂ ನಾನು ಹೋಟೆಲ್‌ನಲ್ಲಿ ತಿನ್ನುವುದು ಅಂತಿಮವಾಯಿತು, ಬೆಂಗಳೂರಿನಲ್ಲಿ ಮನೆ ಮಾಡಿದೆ ನನ್ನಾಕೆಯನ್ನು ಕರೆತಂದೆ ಮಗನೊಂದಿಗೆ ಸಂಭ್ರಮ ಸಂಸಾರ ಸಾಗುತ್ತಿದೆ. ಆದರೂ  ಪೋಷಕರ ಕಿರಿಕ್ಕು ತಪ್ಪಿಲ್ಲ. ನನಗೆ ಅದು ಈಗ ನಿತ್ಯ ರಾಷ್ಟ್ರಗೀತೆಯಂತೆ ಆಗಿದೆ. ನಾನು ಯೋಧನಂತೆ ಆಗಿದ್ದೇನೆ ಬರುವ ಸಮಸ್ಯೆಗಳಿಗೆ ಗುಂಡಿಕ್ಕಿ  ಅಳಿಸುವ ಟ್ರಬಲ್ ಶೂಟರ್ ಆಗಿದ್ದೇನೆ. ಮುಂದೂ ಹಾಗೆಯೇ ಇರುತ್ತೇನೆ.








No comments:

Post a Comment